ಬುದ್ಧ ತನ್ನ ಇತರ ಸನ್ಯಾಸಿಗಳ ಜೊತೆಗೆ ಬೇರೆ ಬೇರೆ ಸ್ಥಳಗಳಿಗೆ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಲೇ ಇದ್ದರು. ಹೀಗೆ ಅವರ ನಿರಂತರ ಸಂಚಾರದಿಂದಾಗಿ ಅದೆಷ್ಟೋ ಘಟನೆಗಳನ್ನು ನೋಡಿ ಅವುಗಳ ಮೂಲಕ ಎಷ್ಟೋ ಪಾಠಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಕೆಲವೊಂದು ದಾಖಲಾಗಿವೆ ಇನ್ನು ಕೆಲವೊಂದು ಹಾಗೆಯೇ ಕಥೆಯ ರೂಪ ಪಡೆದು ಜೀವ ತಾಳಿವೆ. ಒಮ್ಮೆ ಬುದ್ಧ ಒಂದು ಊರಿನಿಂದ ಇನ್ನೊಂದು ಊರಿಗೆ ತನ್ನ ಅನುಚರ ಸನ್ಯಾಸ ಗಳೊಂದಿಗೆ ಸಾಗುತ್ತಿದ್ದಾಗ ಅವರು ಅಂದು ಕೆರೆಯಪಕ್ಕದಲ್ಲಿ ಹಾದು ಹೋಗಬೇಕಿತ್ತು.
ಆಗ ಬುದ್ಧ ತನ್ನ ಅನುಚರ ಸನ್ಯಾಸಿಗಳಿಗೆ ಅವರಲ್ಲಿ ಒಬ್ಬರನ್ನು ಕರೆದು ತನಗೆ ದಣಿವು ಮತ್ತು ಬಾಯಾರಿಕೆ ಯಾಗಿದೆ ಹೋಗಿ ನೀರನ್ನು ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಅನುಚರ ಸನ್ಯಾಸಿ ಬುದ್ಧನಿಗೆ ನೀರನ್ನು ತರಲೆಂದು ಕೆರೆಯ ಬಳಿ ಹೋಗುತ್ತಾನೆ ಅಲ್ಲಿ ಒಂದಿಷ್ಟು ಜನರು ಬಟ್ಟೆ ಒಗೆಯುತ್ತಿದ್ದರು ಹಾಗೂ ಅಲ್ಲೇ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಒಂದು ಎಮ್ಮೆ ಕೂಡಾ ನೀರಿನಲ್ಲಿ ಮುಳುಗಿ ಕೊಂಡಿತ್ತು. ಅದರ ಪರಿಣಾಮದಿಂದ ನೀರು ಕಲ್ಮಶವಾಗಿತ್ತು.
ಆಗ ಆ ಸನ್ಯಾಸಿ ಈ ಕೊಳಕಾದ ನೀರನ್ನು ತಾನು ತನ್ನ ಗುರುವಿಗೆ ಹೇಗೆ ನೀಡುವುದು ಎಂದು ಯೋಚನೆ ಮಾಡುತ್ತಾನೆ. ಹಾಗೆಯೇ ಬರೀ ಕೈಯಲ್ಲಿ ಬಂದ ಸನ್ಯಾಸಿ ತನ್ನ ಗುರು ಬುದ್ಧನಿಗೆ , ಆ ಕೆರೆಯ ನೀರು ಶುದ್ಧವಾಗಿ ಇಲ್ಲ ಅಲ್ಲಿ ಸಾಕಷ್ಟು ಮಲಿನವಾದ ನೀರು ಇದೆ ಅದು ಕುಡಿಯಲು ಯೋಗ್ಯವಾಗಿಲ್ಲ ಎಂದು ಹೇಳುತ್ತಾನೆ. ಆಗ ಬುದ್ಧ ಆ ಸನ್ಯಾಸಿಗೆ ಸಮಧಾನದಲ್ಲಿಯೆ ಇರಲಿ ನಾವು ಸ್ವಲ್ಪ ಸಮಯ ಇಲ್ಲೆಯೆ ವಿಶ್ರಾಂತಿ ಪಡೆಯೋಣ ಎಂದು ಅಲ್ಲಿಯೇ ಒಂದು ಮರದ ಕೆಳಗೆ ಧ್ಯಾನಕ್ಕೆ ಕುಳಿತರು. ಒಂದು ಗಂಟೆಯ ನಂತರ ಬುದ್ಧ ಧ್ಯಾನದಿಂದ ಎಚ್ಚೆತ್ತು ಮತ್ತೆ ಅದೇ ಅನುಚರನನ್ನು ಕರೆದು ಮತ್ತೆ ಅದೇ ಕೆರೆಯಿಂದ ಈಗ ಹೋಗಿ ನೀರನ್ನು ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ.
ತಕ್ಷಣವೇ ಆ ಕೆರೆಯ ಬಳಿ ಹೋದ ಅನುಚರ ಸನ್ಯಾಸಿಗೆ ಅಲ್ಲಿ ಕೊಳಕು ನೀರಿನ ಬದಲು ಸ್ವಚ್ಛವಾದ ಹಾಗೂ ಶುದ್ಧವಾದ ನೀರು ಕಾಣಿಸುತ್ತದೆ. ಮಣ್ಣೆಲ್ಲ ಕೆಳಗೆ ಕುಳಿತು ನೀರು ನಿಷ್ಕಲ್ಮಶವಾಗಿ ಶುದ್ಧವಾಗಿತ್ತು. ಆ ಸನ್ಯಾಸಿ ಅದೇ ನೀರನ್ನು ತೆಗೆದುಕೊಂಡು ಹೋಗಿ ಬುದ್ಧನಿಗೆ ಕೊಡುತ್ತಾನೆ. ಬುದ್ಧ ನೀರನ್ನು ಮತ್ತೆ ಆ ಸನ್ಯಾಸಿಯನ್ನು ನೋಡಿ, ನೀವು ನೀರನ್ನು ಅದರ ಪಾಡಿಗೆ ಅದನ್ನು ಸುಮ್ಮನೆ ಬಿಟ್ಟುಬಿಟ್ಟೀರಿ. ಮಣ್ಣು ತಳ ಸೇರಿ ಅಲ್ಲಿದ್ದ ಕಲ್ಮಶಗಳು ಮಾಯವಾಗಿ ನೀರು ಶುದ್ಧವಾಯಿತು. ಈಗ ಈ ನೀರು ಕುಡಿಯಲು ಯೋಗ್ಯವಾಗಿದೇ. ನೀವಿಲ್ಲಿ ಯಾವ ಕ್ರಿಯೆಯನ್ನೂ ಮಾಡಲಿಲ್ಲ ಎಂದು ಹೇಳುತ್ತಾರೆ.
ಈ ಕಥೆಯಿಂದ ನಾವು ತಿಳಿಯಬೇಕಿರುವುದು ಇಷ್ಟೇ ನಮ್ಮ ಜೀವನದಲ್ಲಿ ನಾವು ನಮ್ಮ ಮನಸ್ಸು ಕೂಡಾ ಹಾಗೆಯೇ. ಕೆಲವೊಮ್ಮೆ ಕೆಲವು ಸಮಯದಲ್ಲಿ ಕೆಲವು ಬಾರಿ ನಮ್ಮ ಮನಸ್ಸು ಕೂಡಾ ಕಲ್ಮಶವಾಗಿ ಇರುತ್ತದೆ. ಅಂದರೆ ನಮ್ಮ ಮನಸ್ಸು ನಮ್ಮ ನಿಯಂತ್ರಣ ತಪ್ಪುತ್ತದೆ. ಯಾವಾಗ ನಮ್ಮ ಮನಸ್ಸು ವಿಚಲ ಆಗುವುದೋ ಅದನ್ನು ಹಾಗೇ ಬಿಟ್ಟು ತನ್ನಷ್ಟಕ್ಕೆ ತಾನೇ ಸರಿ ಆಗಲು ಸ್ವಲ್ಪ ಸಮಯ ನೀಡಬೇಕು. ಮನಸ್ಸು ಶುದ್ಧವಾಗುತ್ತದೆ ನಾವಿಲ್ಲಿ ಏನನ್ನೂ ಮಾಡಬೇಕಿಲ್ಲ. ನಾವು ನಮ್ಮ ಜೀವನದಲ್ಲಿ ಒಳ್ಳೆಯ ನಿರ್ಧಾರ ಹಾಗೂ ಒಳ್ಳೆಯ ಕೆಲಸಗಳನ್ನು ಆಗ ಮಾತ್ರ ಮಾಡಲು ಸಾಧ್ಯ. ಯಾವಾಗ ನಮ್ಮ ಮನಸ್ಸು, ಚಿತ್ತ ಶಾಂತವಾಗಿ ಹಾಗೂ ಶುದ್ಧವಾಗಿ ಇರುವುದೋ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರುವುದೋ ಆಗ ಅಂತಹ ವ್ಯಕ್ತಿಗೆ ಇಡೀ ಜಗತ್ತೇ ತಲೆಬಾಗುವುದು.