ಕೇವಲ ಮೂರು ಪದಾರ್ಥಗಳನ್ನು ಬಳಸಿಕೊಂಡು ರುಚಿಯಾಗಿ ಹಾಲಿನ ಪೆಡ ಮಾಡೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ. ಈ ಪೇಡ ಮಾಡೋಕೆ ಜಾಸ್ತಿ ಖರ್ಚು ಏನೂ ಆಗಲ್ಲ ಅಬ್ಬಬ್ಬಾ 50 ರೂಪಾಯಿ ಒಳಗೆ ಇದರ ಎಲ್ಲ ಖರ್ಚು ಮುಗಿದು ಮನೆಯಲ್ಲೇ 40 ರಿಂದ 45 ಪೇಡ ತಯಾರು ಆಗುತ್ತೆ. ಶೂಗರ್ ಕಾಯಿಲೆ ಒಂದು ಇಲ್ಲದೆ ಇದ್ರೆ ಎಷ್ಟು ಬೇಕಿದ್ರೂ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದು. ಹಾಗಿದ್ರೆ ಈ ಪೇಡ ಮಾಡೋಕೆ ಏನೆಲ್ಲ ಸಾಮಗ್ರಿಗಳು ಬೇಕು ಹಾಗೂ ಮಾಡೋದು ಹೇಗೆ ಅನ್ನೋದನ್ನ ನೋಡೋಣ.
ಬೇಕಾಗುವ ಸಾಮಗ್ರಿಗಳು :-ಹಾಲಿನ ಪೌಡರ್ 2 ಕಪ್, ಸಕ್ಕರೆ ಅರ್ಧ ಕಪ್,ಹಾಲು ಅರ್ಧ ಕಪ್ + 2 ಸ್ಪೂನ್
ತುಪ್ಪ 2 ಟೀ ಸ್ಪೂನ್, ಏಲಕ್ಕಿ ಪುಡಿ
ಮಾಡುವ ವಿಧಾನ : ಮೊದಲು ಒಂದು ಪ್ಯಾನ್ ಗೆ ಎರಡು ಕಪ್ ಹಾಲಿನ ಪೌಡರ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಅರ್ಧ ಕಪ್ ಅಷ್ಟು ಕಾಯಿಸಿ ಆರಿಸಿದ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಕಲಸುವಾಗ ಸ್ವಲ್ಪ ಗಟ್ಟಿ ಎನಿಸಿದರೆ ನೋಡಿಕೊಂಡು ಇನ್ನು ಇಂದು ಅಥವಾ ಎರಡು ಸ್ಪೂನ್ ಹಾಲು ಸೇರಿಸಿಕೊಳ್ಳಬಹುದು. ಆದರೆ ಸ್ವಲ್ಪ ಗಟ್ಟಿಯಾಗಿಯೇ ಇದ್ದರೆ ಒಳ್ಳೆಯದು. ಯಾಕಂದ್ರೆ ಇದನ್ನ ಕಾಯಿಸುವಾಗ ಸಕ್ಕರೆ ಕರಗಿ ಆಗ ತೆಳು ಆಗುತ್ತದೆ. ನಂತರ ಸ್ಟೋವ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕೈ ಬಿಡದೆ ತಿರುವುತ್ತಾ ಇರಬೇಕು. ನಂತರ ಎರಡು ಟೀ ಸ್ಪೂನ್ ಅಷ್ಟು ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಳ್ಳುತ್ತ ಇರಬೇಕು. ನಂತರ ಇದು ಬಿಸಿ ಆದಮೇಲೆ ತೆಳು ಆಗತ್ತೆ ಆಗ ಕೈ ಬಿಡದೆ ಗಂಟು ಆಗದ ಹಾಗೇ ತಿರುವುತ್ತಾ ಮತ್ತೆ ಗಟ್ಟಿ ಆದ ಮೇಲೆ ಕಾಲು ಟೀ ಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. (ಆ ಏಲಕ್ಕಿ ಪುಡಿ ಬೇಕಿದ್ದರೆ ಸೇರಿಸಿಕೊಳ್ಳಬಹುದು ಬೇಡವಾದರೆ ಬಿಡಬಹುದು)
ಗಟ್ಟಿ ಆಗಿ ಒಂದು ಕಡೆ ಸೇರಿಕೊಂಡ ಹಾಲಿನ ಪೌಡರ್ ಮಿಶ್ರಣ ಪೇಡ ಮಾಡಲು ರೆಡಿ ಆಗಿದ್ಯಾ ಅಂತ ನೋಡೋಕೆ ಕೈ ಗೆ ಸ್ವಲ್ಪ ನೀರು ಮುಟ್ಟಿಕೊಂಡು ಸ್ವಲ್ಪ ಹಾಲಿನ ಪೌಡರ್ ಮಿಶ್ರಣವನ್ನು ಕೈ ಗೆ ತೆಗೆದುಕೊಂಡು ನೋಡಬೇಕು. ಅದು ಕೈ ಗೆ ಅಂಟದೆ ಹಾಗೆ ಉಂಡೆ ಕಟ್ಟುವ ಹಾಗೆ ಬಂದರೆ ರೆಡಿ ಆಗಿದೇ ಎಂದು ಅರ್ಥ. ನಂತರ ಅದನ್ನ ಸೈಡಲ್ಲಿ ಇಟ್ಟು ಒಂದು ಪ್ಲೇಟ್ ಅಥವಾ ಮಣೆಯ ಮೇಲೆ ಸ್ವಲ್ಪ ತುಪ್ಪ ಸವರಿ ಅದರ ಮೇಲೆ ಗಟ್ಟಿಯಾದ ಹಾಲಿನ ಪುಡಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಬೇಕು. ನಂತರ ಒಂದು ಪ್ಲಾಸ್ಟಿಕ್ ಮೇಲೆ ಈ ಮಿಶ್ರಣವನ್ನು ಹಾಕಿ ಮೇಲಿಂದ ಇನ್ನೊಂದು ಪ್ಲಾಸ್ಟಿಕ್ ಇಟ್ಟು ಲಟ್ಟಣಿಗೆಯ ಸಹಾಯದಿಂದ ಸರಿ ಮಾಡಿಕೊಂಡು ಕುಕ್ಕೀಸ್ ಕಟರ್ ಅಥವಾ ಯಾವುದೇ ಬಾಟಲ್ ಮುಚ್ಚಳದ ಸಹಾಯದಿಂದ ಎಲ್ಲವನ್ನೂ ಸರಿಯಾಗಿ ಕಟ್ ಮಾಡಿಕೊಂಡು ಒಂದು ಕಡೆ ಜೋಡಿಸಿಕೊಂಡು ಸ್ವೀಟ್ ಮೇಲೆ ಹಾಕುವ ಫಾಯಿಲ್ ಶೀಟ್ ಹಾಕಿ ( ಬೇಕಿದ್ರೆ), ನಂತರ ಮೇಲೆ ಒಂದೊಂದು ಪಿಸ್ತಾ ಚೂರು ಇಟ್ಟು ಅಲಂಕಾರ ಮಾಡಿದ್ರೆ ರುಚಿಯಾದ ಹಾಲಿನ ಪೌಡರ್ನ ಪೆಡ ರೆಡಿ.