ಕೆಲವು ಮನೆಯಲ್ಲಿ ದೋಸೆಹಿಟ್ಟು ಹೆಚ್ಚಾಗಿ ಉಳಿದಿರುತ್ತದೆ ಅಂತಹ ಸಂದರ್ಭದಲ್ಲಿ ಕೆಲವರು ದೋಸೆ ಹಿಟ್ಟನ್ನು ಹುಳಿ ಬರುತ್ತದೆ ಎಂದು ಎಸೆಯುತ್ತಾರೆ. ಇನ್ನು ಕೆಲವರು ಫ್ರಿಜ್ ನಲ್ಲಿ ಇಟ್ಟುಕೊಂಡು ಮತ್ತು ಬಳಕೆ ಮಾಡುತ್ತಾರೆ. ಇಂದಿನ ಕಾಲದಲ್ಲಿ ಯಾವುದೇ ಆಹಾರ ಪದಾರ್ಥವನ್ನು ಕೂಡ ಹಾಳು ಮಾಡುವಂತಿಲ್ಲ . ಹಾಗಾಗಿ ಹೆಚ್ಚಾದ ದೋಸೆ ಹಿಟ್ಟಿನಿಂದ ಸಂಜೆ ಸಮಯದಲ್ಲಿ ಟೀ ಅಥವಾ ಕಾಫಿ ಜೊತೆಗೆ ಸ್ನ್ಯಾಕ್ಸ್ ಆಗಿ 3 ತಿಂಡಿ ತಯಾರಿಸಿ ದೋಸೆ ಹಿಟ್ಟನ್ನು ಹೇಗೆ ಮರುಬಳಕೆ ಮಾಡುವುದು? ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಇಲ್ಲಿ ತಿಳಿಸಿ ಕೊಡುತ್ತಿರುವ ಅಂತಹ ಮೂರು ರೆಸಿಪಿಗಳು ದೋಸೆ ಹಿಟ್ಟಿನಿಂದ ಮಾಡುವ ರೆಸಿಪಿ ಗಳಾಗಿರುತ್ತದೆ. ದೋಸಾ ಸ್ಯಾಂಡ್ವಿಚ್, ಪಕೋಡ ಮತ್ತು ಚೀಸ್ ದೋಸೆ.
ಮೊದಲು ಪಕೋಡ ಮಾಡುವುದು ಹೇಗೆ ಅಂತಾ ನೋಡೋಣ. ಪಕೋಡ ಮಾಡುವ ಬೇಕಾಗಿರುವಂತಹ ಸಾಮಗ್ರಿಗಳು : ದೋಸೆ ಹಿಟ್ಟು ಒಂದು ಕಪ್, ಕಡಲೆ ಹಿಟ್ಟು ಅರ್ಧ ಕಪ್, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಒಂದು, ಕೊತ್ತಂಬರಿ ಸೊಪ್ಪು 2 ಸ್ಪೂನ್ ನಷ್ಟು, ಸಣ್ಣಗೆ ಹೆಚ್ಚಿದ ಈರುಳ್ಳಿ1, ಸಣ್ಣದಾಗಿ ಕಟ್ ಮಾಡಿದ ಕ್ಯಾರೆಟ್ 1, ಸಣ್ಣದಾಗಿ ಕಟ್ ಮಾಡಿದ ಕ್ಯಾಪ್ಸಿಕಂ ಅರ್ಧಭಾಗ, ಒಂದು ದೊಡ್ಡ ಚಮಚ ಸಣ್ಣದಾಗಿ ಕಟ್ ಮಾಡಿದ ಗೋಡಂಬಿ ಹಾಗೂ ಉಪ್ಪು ರುಚಿಗೆ ತಕ್ಕಷ್ಟು.
ಇನ್ನು ಪಕೋಡ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಂಗ್ ಬೌಲ್ ಗೆ ಸೇರಿಸಿ ಮತ್ತೆ ನೀರು ಹಾಕದೆ ಹಾಗೆಯೇ ಮಿಕ್ಸ್ ಮಾಡಿಕೊಂಡು ಕಾದಿರುವ ಎಣ್ಣೆಯಲ್ಲಿ ಚಮಚದ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಬಿಟ್ಟು ಚೆನ್ನಾಗಿ ಗರಿ ಯಾಗುವವರೆಗೂ ಕರಿಯಬೇಕು. ಈ ಪಕೋಡವನ್ನು ಹಾಗೆಯೇ ತಿನ್ನಬಹುದು ಅಥವಾ ಚಟ್ನಿ ಸಾಂಬಾರ್ ಜೊತೆಗೂ ಕೂಡ ತಿನ್ನಬಹುದು. ಈ ರೀತಿಯಾಗಿ ಮಾಡುವುದರಿಂದ ನಾವು ಬರೀ ಕಡಲೆಹಿಟ್ಟನ್ನು ಮಾತ್ರ ಬಳಸಿ ಮಾಡುವುದಕ್ಕಿಂತ ಹೆಚ್ಚು ರುಚಿಯಾಗಿರುತ್ತದೆ.
ಎರಡನೇ ರೆಸಿಪಿ ದೋಸಾ ಸ್ಯಾಂಡ್ವಿಚ್. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ. ಒಂದು ಪ್ಯಾನ್ ಗೆ ತುಪ್ಪ, ಜೀರಿಗೆ, ಸಾಸಿವೆ, ಮುಕ್ಕಾಲು ಚಮಚ ಕೆಂಪು ಮೆಣಸಿನ ಪುಡಿ, ಕಾಲು ಚಮಚ ಕೊತ್ತಂಬರಿ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅರ್ಧ ಚಮಚ ಅಮ್ಚುರ್ ಪುಡಿ, ಕಾಲು ಚಮಚ ಒಣ ಶುಂಠಿಪುಡಿ ಹಾಗೂ ಒಂದು ಚಮಚದಷ್ಟು ಕಸುರಿ ಮೇತಿ ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಸ್ವಲ್ಪ ಹುರಿದುಕೊಂಡು ನಂತರ ಬೇಯಿಸಿದ 3 ಆಲೂಗಡ್ಡೆಯನ್ನು ಹಾಕಿ ಮ್ಯಾಶರ್ ಸಹಾಯದಿಂದ ಮ್ಯಾಶ್ ಮಾಡಿ ಮಿಕ್ಸ್ ಮಾಡಿ ಇಟ್ಟುಕೊಳ್ಳಬೇಕು. ಆಲೂಗಡ್ಡೆ ಸ್ಟಫಿಂಗ್ ಮೂಲಕ ಸ್ಯಾಂಡ್ವಿಚ್ ಹೇಗೆ ಮಾಡುತ್ತೇವೆಯೋ ಅದೇ ರೀತಿ ಇದು ದೋಸ ಸ್ಯಾಂಡ್ವಿಚ್. ನಂತರ ದೋಸೆ ಕಾವಲಿಗೆ 2ಚಮಚ ಎಣ್ಣೆ ಹಾಕಿ ದೋಸೆ ಕಾವಲಿಯನ್ನು ಕಾಯಿಸಿಕೊಂಡು ಒಂದೆ ಗಾತ್ರದ 2 ಮಿನಿ ದೋಸೆಗಳನ್ನು ಮಾಡಿಕೊಂಡು ಸಣ್ಣ ಉರಿಯಲ್ಲಿಟ್ಟು ದೋಸೆ ಮೇಲೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಬೇಕು. ಇಲ್ಲಿ ದೋಸೆಯನ್ನು ತಿರುಗಿಸಿ ಹಾಕುವ ಅವಶ್ಯಕತೆ ಇಲ್ಲ ಹಾಗೆಯೇ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು ನಂತರ ಒಂದು ದೋಸೆಯ ಮೇಲೆ ಮೊದಲೇ ಮಾಡಿ ಇಟ್ಟುಕೊಂಡು ಆಲೂಗಡ್ಡೆ ಮಿಶ್ರಣವನ್ನು ಇಟ್ಟು ಸರಿಯಾಗಿ ದೋಸೆ ಮೇಲೆ ಹರಡಿ ಇನ್ನೊಂದು ದೋಸೆ ಯಿಂದ ಮುಚ್ಚಿ ನಂತರ ಸ್ವಲ್ಪ ಎರಡೂ ಕಡೆ ಬಿಸಿ ಮಾಡಿದರೆ ದೋಸಾ ಸ್ಯಾಂಡ್ವಿಚ್ ಕೂಡಾ ರೆಡಿ.
ಇನ್ನ ದೋಸೆ ಹಿಟ್ಟಿನಿಂದ ಮಾಡಬಹುದಾದ ಮೂರನೆಯ ಹಾಗೂ ಕೊನೆಯ ರಿಸಿಪಿ ಎಂದರೆ ದೋಸಾ ಕಟ್ಲೆಟ್ ಅಥವಾ ಚೀಸ್ ದೋಸೆ. ದೋಸೆ ಕಟ್ಲೆಟ್ ಮಾಡಲು ದೋಸೆ ಮಾಡುವ ಕಾವಲಿಯನ್ನು ಬಿಸಿ ಮಾಡಲು ಇಟ್ಟುಕೊಂಡು ಕಟ್ಲೇಟ್ ಮೌಲ್ಡ್ ಇಟ್ಟುಕೊಂಡು ಅದರಲ್ಲಿ ದೋಸೆ ಹಿಟ್ಟನ್ನು ಹಾಕಿ ಬೇಯಿಸಿಕೊಳ್ಳಬೇಕು. ಕಟ್ಲೆಟ್ ಮೌಲ್ಡ್ ಇಲ್ಲದೆ ಹೋದಲ್ಲಿ ಮಿನಿ ದೋಸೆಯನ್ನು ಮಾಡಿಕೊಂಡು ಅವುಗಳಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಂಡು ಮೇಲಿನಿಂದ ತುರಿದ ಚೀಸ್ ಹಾಕಬೇಕು. ನಂತರ ಮೇಲಿನಿಂದ ನಿಮಗಿಷ್ಟವಾದ ತರಕಾರಿಗಳನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಹಾಕಬೇಕು. ಅವುಗಳಮೇಲೆ ಚಿಲ್ಲಿ ಫ್ಲೇಕ್ಸ್ ಹಾಗೂ ಒರೆಗನೋ ಸಿಂಪಡಿಸಿ ಸಣ್ಣ ಉರಿಯಲ್ಲಿಟ್ಟು ಬೇಯಿಸಿಕೊಳ್ಳಬೇಕು. ದೋಸೆ ಸರಿಯಾಗಿ ಬೆಯಬೇಕು ಹಾಗೂ ಚೀಸ್ ಕೂಡ ಸರಿಯಾಗಿ ಕರಗುವವರೆಗೂ ಬೇಯಿಸಿದರೆ ಚೀಸ್ ದೋಸೆ ರೆಡಿ.
ಈ ರೀತಿಯಾಗಿ ಹೆಚ್ಚುಳಿದ ದೋಸೆ ಹಿಟ್ಟನ್ನು ಬಳಸಿಕೊಂಡು ಚೀಸ್ ದೋಸೆ, ಪಕೋಡ ಹಾಗೂ ದೋಸೆ ಸ್ಯಾಂಡ್ವಿಚ್ ಈ ಮೂರನ್ನು ತಯಾರಿಸಿಕೊಳ್ಳಬಹುದು.