ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆಯಾಗಿರುತ್ತಾರೆ. ಅಲ್ಲದೆ ಇವರು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕರಾಗಿರುತ್ತಾರೆ. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ರಾಷ್ಟ್ರಪತಿಗಳು ಸಂವಿದಾನ, ಕಾರ್ಯಾಂಗ, ರಾಷ್ಟ್ರದ ಮುಖ್ಯಸ್ಥರೂ ಆಗಿರುತ್ತಾರೆ. ಇವರು ಹಲವು ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿರುತ್ತಾರೆ. ಅಲ್ಲದೆ ಸಂವಿಧಾನದ ರಕ್ಷಕರೂ ಕೂಡಾ ಹೌದು. ಆದರೆ ಈ ಎಲ್ಲಾ ಅಧಿಕಾರಗಳ ಮಿತಿಗಾಗಿ ಅವರು ಯಾವುದೇ ಅಧಿಕಾರ ಚಲಾಯಿಸಲು ಪ್ರಧಾನ ಮಂತ್ರಿಯವರ ಅಥವಾ ಕೇಂದ್ರ ಮಂತ್ರಿಮಂಡಲದ ಸಲಹೆಯ ಮೇಲೆ ಮಾತ್ರ ಆಜ್ಞೆ ಮಾಡಬಹುದು. ಹಾಗಿದ್ದರೆ ಬನ್ನಿ 1947 ರಿಂದ ಇಲ್ಲಿಯವರೆಗೆ ಒಟ್ಟು 15 ರಾಷ್ಟ್ರಪತಿಗಳು ಕಾರ್ಯ ನಿರ್ವಹಿಸಿದ್ದಾರೆ ಅವರುಗಳು ಏಷ್ಟು ಓದಿದ್ದಾರೆ ಅವರ ಅರ್ಹತೆಗಳು ಏನೇನು ಎಂಬುದನ್ನ ಈ ಲೇಖನದಲ್ಲಿ ನೋಡೋಣ.
ಬಾಬು ರಾಜೇಂದ್ರ ಪ್ರಸಾದ್ – ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು, ಬಿಹಾರದ ಜೇರಡ್ಡೆ ಎಂಬ ಹಳ್ಳಿಯ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರು. ಮುಸಲ್ಮಾನ ಮೌಲ್ವಿಯಿಂದ ಪರ್ಶಿಯನ್ ಭಾಷಾ ಶಿಕ್ಷಣ ಪಡೆದರು. ನಂತರ ಬಿಎ, ಎಂ ಎ ಹಾಗೂ ಕಾನೂನು ವಿದ್ಯಾಭ್ಯಾಸ ಪಡೆದು, ಕೊಲ್ಕತ್ತಾ ಮತ್ತು ಪಾಟ್ನಾಗಳಲ್ಲಿ ವಕೀಲ ವೃತ್ತಿ ಮಾಡಿದರು. 1950 ರ ಜನವರಿ 26 ರಂದು ಭಾರತವು ಸ್ವತಂತ್ರ ಗಣರಾಜ್ಯವಾದಾಗ ಸ್ವತಂತ್ರ ಭಾರತದ ಮೊಟ್ಟಮೊದಲ ರಾಷ್ಟ್ರಪತಿಯಾಗಿ ರಾಜೇಂದ್ರ ಪ್ರಸಾದ್ ಅಧಿಕಾರ ಸ್ವೀಕರಿಸಿದರು. ಪಂಡಿತ್ ಜವಾಹರ ಲಾಲ್ ನೆಹರೂ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಟ್ಟು 12 ವರ್ಷ 105 ದಿನಗಳ ಕಾಲ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್, ಆ ಸ್ಥಾನಕ್ಕೆ ಅನನ್ಯ ಗೌರವ ತಂದುಕೊಟ್ಟರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ – ಭಾರತದ ಎರಡನೇ ರಾಷ್ಟ್ರಪತಿ, ದಕ್ಷಿಣ ಭಾರತದಿಂದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಮೊದಲಿಗರು. ಸೆಪ್ಟೆಂಬರ್ 5, 1888 ರಲ್ಲಿ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು. ರಾಧಾಕೃಷ್ಣನ್ ಅವರು ಮದ್ರಾಸ್ ಈಗಿನ ಚೆನ್ನೈನ ಕ್ರಿಶ್ಚಿಯನ್ ಕಾಲೇಜಲ್ಲಿ ತತ್ವಜ್ಞಾನ ವಿಷಯದಲ್ಲಿ ಬಿಎ, ಎಂಎ ಪದವಿ ಪಡೆದರು. 1918 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದಕ್ಕಾಗಿ ಇವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇವರು ರಾಷ್ಟ್ರಪತಿ ಹುದ್ದೆಗೆ ಏರುವುದಕ್ಕೂ ಮುನ್ನವೇ ಇವರಿಗೆ ಭಾರತ ರತ್ನ ಪ್ರಶಸ್ತಿ ಬಂದಿತ್ತು. 1962 ರಿಂದ 1967 ರವರೆಗೆ ಕಾಂಗ್ರೆಸ್ ಅವಧಿಯಲ್ಲಿ ಇವರು ರಾಷ್ಟ್ರಪತಿಯಾಗಿದ್ದರು.
ಜಾಕಿರ್ ಹುಸೇನ್ – ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಟ್ಟ ಮೊದಲ ಮತ್ತು ದೇಶದ ಮೂರನೇ ರಾಷ್ಟ್ರಪತಿ. ಡಾ.ಜಾಕಿರ್ ಹುಸೇನ್ ಅವರು ಫೆಬ್ರವರಿ 8, 1897 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಸೇವೆಯಲ್ಲಿದ್ದಾಗಲೇ 1969 ರ ಮೇ 3ರಂದು ವಿಧಿವಶರಾದರು. ಭಾರತ ಸರ್ಕಾರವು ಅವರಿಗೆ 1954 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಮತ್ತು 1969 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು 1 ವರ್ಷ 355 ದಿನಗಳವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು.
ವರಾಹಗಿರಿ ವೆಂಕಟ ಗಿರಿ – ವಿ ವಿ ಗಿರಿಯವರು ಆಗಸ್ಟ್ 10, 1894 ರಲ್ಲಿ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಜನಿಸಿದರು. ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ಕಾನೂನು ವಿದ್ಯಾರ್ಥಿಯಾಗಿದ್ದರು, ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಿದರು. ವಿ ವಿ ಗಿರಿಯವರು ಎರಡು ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. 1969 ರ ಮೇ 3 ರಿಂದ 1969 ರ ಜುಲೈ 20 ರವರೆಗೆ ಕೇವಲ 78 ದಿನಗಳವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. ನಂತರ ಎರಡನೇ ಅವಧಿಯಲ್ಲಿ 1969 ರಿಂದ 1974 ರವರೆಗೆ ಪೂರ್ಣಾವಧಿ ರಾಷ್ಟ್ರಪತಿಯಾಗಿದ್ದರು.
ಮೊಹಮ್ಮದ್ ಹಿದಾಯತ್ ಉಲ್ಲಾ – ಇವರು ಉತ್ತರ ಪ್ರದೇಶದ ಲಖೋದಲ್ಲಿ ಡಿಸೆಂಬರ್ 17, 1905 ರಲ್ಲಿ ಜನಿಸಿದರು. ಹಿದಾಯತ್ ಉಲ್ಲಾ ಅವರು ಖಾನ್ ಬಹುದ್ದೂರ್ ಹಫೀಜ್ ಕುಟುಂಬದವರು. ಹಿದಾಯತ್ ಉಲ್ಟಾ ನಾಗಪುರದಲ್ಲಿ ಬಿ ಎ, ಎಂ ಎ ಕಾನೂನು ಪದವಿ ಮತ್ತು ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಿದರು. ಅವರು ಜುಲೈ 20, 1969 ರಿಂದ ಆಗಸ್ಟ್ 24, 1969 ರವರೆಗೆ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು. ಕೇವಲ 35 ದಿನಗಳವರೆಗೆ ಅಧಿಕಾರದಲ್ಲಿದ್ದರು. ಫಕ್ರುದ್ದೀನ್ ಅಲಿ – ಭಾರತದ 5ನೇ ರಾಷ್ಟ್ರಪತಿ. 1905 ಮೇ 13 ರಂದು ದೆಹಲಿಯಲ್ಲಿ ಫಕ್ರುದ್ದೀನ್ ಜನಿಸಿದರು. ಭಾರತದ ಎರಡನೇ ಮುಸ್ಲಿಂ ರಾಷ್ಟ್ರಪತಿ. ಕಾನೂನು ವಿದ್ಯಾಭ್ಯಾಸ ಮಾಡಿದ್ದ ಅವರು, 1925 ರಲ್ಲಿ ಇಂಗ್ಲೆಂಡ್‌ನಲ್ಲಿ ಜವಾಹರ ಲಾಲ್ ನೆಹರೂ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರು. ಬಳಿಕ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಫಕ್ರುದ್ದೀನ್ ಅವರನ್ನು 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ವೇಳೆ ಬಂಧಿಸಲಾಯಿತು. ಸ್ವತಂತ್ರ ಭಾರತದ ಮೊದಲ ಸರ್ಕಾರದಲ್ಲಿ ಹಣಕಾಸು, ಕಂದಾಯ, ಕಾರ್ಮಿಕ ಸಚಿವರಾಗಿದ್ದರು. ಬಳಿಕ 1974 ರಿಂದ 1977 ರವರೆಗೆ ರಾಷ್ಟ್ರಪತಿಯಾಗಿದ್ದರು.
ಬಸಪ್ಪ ದಾನಪ್ಪ ಜತ್ತಿ – ಲಿಂಗಾಯತ ಸಮುದಾಯಕ್ಕೆ ಸೇರಿರುವ ಬಿ ಡಿ ಜತ್ತಿ 1912, ಸೆಪ್ಟೆಂಬರ್ 10 ರಂದು ಕರ್ನಾಟಕದ ಜಮಖಂಡಿ ತಾಲೂಕಿನ ಕುರಗೋಡದಲ್ಲಿ ಜನಿಸಿದರು. ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಜತಿ ಜಮಖಂಡಿಯಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಅವರು, 1958 ರಿಂದ 1962 ರವರೆಗೆ ಕರ್ನಾಟದಕ ಮುಖ್ಯಮಂತ್ರಿಯಾಗಿದ್ದರು. ನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ತೊಡಗಿಸಿಕೊಂಡು 1968 ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡರು. 1973 ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974 ರಲ್ಲಿ ಭಾರತದ ಉಪರಾಷ್ಟ್ರಾಧ್ಯಕ್ಷರಾಗಿ 1980 ರ ವರೆಗೆ ಸೇವೆ ಸಲ್ಲಿಸಿದರು. ಬಳಿಕ 1977 ಫೆಬ್ರವರಿ 11 ರಿಂದ ಜುಲೈ 25, 1977 ರವರೆಗೆ ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು.
ನೀಲಂ ಸಂಜೀವ ರೆಡ್ಡಿ – ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ ಇವರು ಜನಿಸಿದರು. ರಾಷ್ಟ್ರಪತಿ ಆಗಿದ್ದ ಜಾಕೀರ್ ಹುಸೇನ್ ಅವರ ಅಕಾಲಿಕ ಮರಣದ ನಂತರ ನೀಲಂ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿತು. 1977 ರಲ್ಲಿ ಸಂಜೀವರೆಡ್ಡಿ ಅವರು ಅವಿರೋಧವಾಗಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಮಾತ್ರವಲ್ಲದೆ ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿ.
ಗ್ಯಾನಿ ಜೇಲ್ ಸಿಂಗ್ – 1916 ಮೇ 5 ರಂದು ಪಂಜಾಬಿನ ಫರೀದ್ ಕೋಟ್ ಜಿಲ್ಲೆಯ ಸಂಧ್ಯಾನ್ನಲ್ಲಿ ಗ್ಯಾನಿ ಜೈಲ್ ಸಿಂಗ್ ಜನಿಸಿದರು. ಗ್ಯಾನಿ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜ್ಯಸಭಾ ಮತ್ತು ಲೋಕಸಭಾ ಸದಸ್ಯರಾಗಿದ್ದರು. ಪಂಜಾಬಿನಲ್ಲಿ 1972 ರಿಂದ 1977 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಆ ಬಳಿಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದ ಅವರು 1980 ರಲ್ಲಿ ಇಂದಿರಾ ಗಾಂಧಿಯವರ ಸಂಪುಟದಲ್ಲಿ ಗೃಹ ಸಚಿವರಾಗಿ ಕೆಲಸ ಮಾಡಿದರು. ಬಳಿಕ ಅವರು ರಾಷ್ಟ್ರಪತಿಯಾಗಿ ಅವಿರೋಧ ಆಯ್ಕೆಯಾಗಿ 1982 ರಿಂದ 1987 ವರಗೆ ಸೇವೆಯಲ್ಲಿದ್ದರು. ರಾಷ್ಟ್ರಪತಿ ಹುದ್ದೆಗೇರಿದ ಸಿಖ್ ಸಮುದಾಯದ ಮೊದಲಿಗರು.
ರಾಮಸ್ವಾಮಿ ವೆಂಕಟರಾಮನ್ – ಭಾರತದ ಎಂಟನೇ ರಾಷ್ಟ್ರಪತಿ. 1910 ರಲ್ಲಿ ತಮಿಳುನಾಡಿನ ತಾಂಜಾವೂರು ಜಿಲ್ಲೆಯ ರಾಜಮಡಮ್ ಗ್ರಾಮದ ಅಯ್ಯರ್ ಕುಟುಂಬದಲ್ಲಿ ಜನಿಸಿದರು. ಇವರು ಕಾನೂನು ಪದವಿ ಪಡೆದಿದ್ದು, ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. 1984 ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಆರ್ ವೆಂಕಟರಾಮನ್, 1987 ರಲ್ಲಿ ಭಾರತದ ರಾಷ್ಟ್ರಪತಿಗಳಾಗಿ ಆಯ್ಕೆಯಾದರು. ನಂತರ ಐದು ವರ್ಷಗಳ ಕಾಲ ರಾಷ್ಟ್ರಪತಿ ಹುದ್ದೆಯಲ್ಲಿ ಮುಂದುವರಿದರು.
ಶಂಕರ್ ದಯಾಳ್ ಶರ್ಮಾ – ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಗಸ್ಟ್ 19, 1918 ರಲ್ಲಿ ಜನಿಸಿದರು. ಫಿಟ್ ವಿಲಿಯಮ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಶರ್ಮಾ ಸಮಾಜಸೇವೆಯಲ್ಲಿಯೂ ನಿರತರಾಗಿದ್ದರು. ಇವರ ಸಮಾಜಸೇವೆಯನ್ನು ಗುರುತಿಸಿದ ಲಖೋ ವಿಶ್ವವಿದ್ಯಾಲಯವು ಶರ್ಮಾರವರಿಗೆ ಚಕ್ರವರ್ತಿ ಚಿನ್ನದ ಪದಕ ನೀಡಿ ಗೌರವಿಸಿತ್ತು. ಶರ್ಮಾ ಅವರು 1992 ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಜಾರ್ಜ್ ಗಿಲ್ಬರ್ಟ್ ಸ್ವಲ್ ಅವರನ್ನು ಸೋಲಿಸಿ ರಾಷ್ಟ್ರಪತಿಯಾದರು.
ಕೊಚೇರಿ ರಮಣ್ ನಾರಾಯಣನ್ – ದೇಶದ ಅತ್ಯುನ್ನತ ಹುದ್ದೆಗೇರಿದ ದಲಿತ ಸಮುದಾಯಕ್ಕೆ ಸೇರಿದ ಮೊದಲ ನಾಯಕ ಕೆ ಆರ್ ನಾರಾಯಣನ್, 4 ಫೆಬ್ರವರಿ 1920 ರಂದು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು. ಕೆಲ ದಿನಗಳ ಕಾಲ ಪತ್ರಕರ್ತರಾಗಿದ್ದ ನಾರಾಯಣನ್, ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವಿದ್ಯಾರ್ಥಿ ವೇತನ ಪಡೆದು ರಾಜ್ಯಶಾಸ್ತ್ರವನ್ನು ಅಭ್ಯಾಸ ಮಾಡಿದರು. ನೆಹರೂ ಆಡಳಿತದಲ್ಲಿ ಇವರು ಜಪಾನ್, ಇಂಗ್ಲೆಂಡ್, ಥೈಲ್ಯಾಂಡ್, ಟರ್ಕಿ, ಚೀನಾ, ಅಮೆರಿಕ ದೇಶಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು. ನಂತರ 1997 ರಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು.
ಅಬ್ದುಲ್ ಕಲಾಂ – ತಮಿಳುನಾಡಿನ ರಾಮೇಶ್ವರಂನಲ್ಲಿ ಜನನ. ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದರು. 2002 ರಲ್ಲಿ ಬಿಜೆಪಿ ನೇತೃತ್ವದ ಎನ್ನಿ ಸರ್ಕಾರದಲ್ಲಿ ಕಲಾಂ ರಾಷ್ಟ್ರಪತಿಯಾದರು. ಐದು ವರ್ಷಗಳ ಅವಧಿ ಪೂರೈಸಿದ ಬಳಿಕ ಶಿಕ್ಷಣ, ಬರವಣಿಗೆ, ಸಾರ್ವಜನಿಕ ಸೇವೆಗೆ ಮರಳಿದರು. ಕಲಾಂ ಅವರು ಭಾರತದ ಅತ್ಯುನ್ನತ ಗೌರವ ಭಾರತ ರತ್ನ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪ್ರತಿಭಾ ಪಾಟೀಲ್ – ಭಾರತದ ಮೊದಲ ಮಹಿಳಾ ರಾಷ್ಟ್ರಪತಿ. 1934 ರ ಡಿಸೆಂಬರ್ 19 ರಂದು ಮಹಾರಾಷ್ಟ್ರದ ಜಲಗಾಂವ್ ಬಳಿಯ ನಾಡ್ಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದರು. ಸಾಹುಕಾರ್ ಪರಿವಾರಕ್ಕೆ ಸೇರಿದ್ದ ಇವರು ರಾಜಸ್ಥಾನದಿಂದ ವಲಸೆ ಬಂದು ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಕುಟುಂಬಕ್ಕೆ ಸೇರಿದವರು. ಎಂ ಎ ಡಿಗ್ರಿ ಮಾಡಿದ್ದ ಇವರಿಗೆ ಅನೇಕ ಪಾರಿತೋಷಕಗಳು ಲಭಿಸಿವೆ. ಪ್ರತಿಭಾ ಪಾಟೀಲ್ ತಮ್ಮ 28 ನೇ ವಯಸ್ಸಿನಲ್ಲಿ ಶಾಸಕಿಯಾದರು. ನಂತರ ಹಲವು ಖಾತೆಗಳನ್ನು ನಿರ್ವಹಿಸಿ ಜುಲೈ 25, 2007 ರಂದು ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು.
ಪ್ರಣಬ್ ಮುಖರ್ಜಿ – ಪಶ್ಚಿಮಬಂಗಾಳದಲ್ಲಿ 1935, ಡಿಸೆಂಬರ್ 11 ರಂದು ಪ್ರಣಬ್ ಮುಖರ್ಜಿ ಜನಿಸಿದರು. ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಇವರು ವಕೀಲ ವೃತ್ತಿ ಮತ್ತು ಕಾಲೇಜು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 1969 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಐದು ದಶಕದ ತಮ್ಮ ಸಂಸದೀಯ ರಾಜಕಾರಣದಲ್ಲಿ ಕೇಂದ್ರ ಸಚಿವ ಸಂಪುಟದ ಭಾಗವಾಗಿ ರಕ್ಷಣಾ, ವಿದೇಶಾಂಗ, ಹಣಕಾಸು ಖಾತೆ ಸೇರಿದಂತೆ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದಾರೆ. ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಅವಧಿಯಲ್ಲಿ 2012 ರಿಂದ 2017 ರವರೆಗೆ ರಾಷ್ಟ್ರಪತಿಯಾಗಿದ್ದರು.
ರಾಮನಾಥ್ ಕೋವಿಂದ್ – ದೇಶದ ಎರಡನೇ ದಲಿತ ರಾಷ್ಟ್ರಪತಿ. 1945 ರ ಅಕ್ಟೋಬರ್ 1 ರಂದು ಬಿಹಾರದಲ್ಲಿ ಜನನ. ಕಾನ್ಸುರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು, ದೆಹಲಿ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು. 1978 ರ ಬಳಿಕ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡಿದರು. 1994-2000 ಮತ್ತು 2000-2006ರ ಎರಡು ಅವಧಿಗಳಲ್ಲಿ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದರು. ನಂತರ 2017 ರ ಜುಲೈ 24 ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ಇದೀಗ ರಾಮನಾಥ ಕೋವಿಂದ್ ಅವರ ಅಧಿಕಾರವಧಿ ಜುಲೈ 24 ಕ್ಕೆ ಮುಕ್ತಾಯಗೊಂಡಿದೆ.
ದೌಪದಿ ಮುರ್ಮು – ಪ್ರಸ್ತುತ ಭಾರತದ ರಾಷ್ಟ್ರಪತಿ ಆಗಿ ಓಡಿಸಾದ ಬುಡಕಟ್ಟು ಸಮುದಾಯದ ಮಹಿಳೆ ಆಯ್ಕೆಯಾಗಿದ್ದಾರೆ. ಇವರು 1958 ಜೂನ್ 20ರಂದು ಜನಿಸಿದರು. ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದೌಪದಿ ಮುರ್ಮು ಅವರು ಬಿಎ ಪದವಿ ಪಡೆದಿದ್ದಾರೆ. ಇವರು ಪದವಿ ನಂತರ ಸಹಾಯಕ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಜಾರ್ಖಂಡನ ಮೊದಲ ಮಹಿಳಾ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಆಗಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.