ಅಂದು ಭಿಕ್ಷುಕಿಯಾಗಿದ್ದವಳು ಇಂದು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ ಕೇಳಿದ್ರೆ ಅಚ್ಚರಿ ಪಡ್ತೀರಾ!

ಇದೊಂದು ಸ್ಪೂರ್ತಿದಾಯಕ ಕಥೆ. ನಾವಿಂದು ನೋಡುತ್ತಿರುವ ಹಾಗೆ ಅದೆಷ್ಟೋ ಮಕ್ಕಳಿಗೆ ತಂದೆ-ತಾಯಿಯರು ಅವರ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲಿ ಎಂಬ ಕಾರಣಕ್ಕೆ ನಗರದಲ್ಲಿರುವ ಅತ್ಯಂತ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಕಷ್ಟವೋ ಸುಖವೋ ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಂದೆ-ತಾಯಿ ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಇವುಗಳ ಪರಿವೆಯೇ ಇಲ್ಲದೆ ತಂದೆ ತಾಯಿಯ ಪ್ರೀತಿಯನ್ನು ದುರುಪಯೋಗಗೊಳಿಸಿಕೊಳ್ಳುವ ಮಕ್ಕಳೂ ಇದ್ದಾರೆ. ಆದರೆ ಇಂತಹ ಎಲ್ಲಾ ಸೌಲಭ್ಯಗಳು ಇದ್ದೂ, ಯಾವ ಸಾಧನೆಯನ್ನು ಮಾಡದ ಮಕ್ಕಳ ನಡುವೆ ತಂದೆ-ತಾಯಿಯೇ ಇಲ್ಲದ ಸೋನು ಮಾಡಿರುವ ಸಾಧನೆ ಎಲ್ಲರಿಗೂ ಮಾದರಿ.

ಈ ಕಥೆಯನ್ನು ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಯಾಕೆಂದರೆ ಸೋನು ಎನ್ನುವ ಅನಾಥ ಹುಡುಗಿ 10ನೇ ತರಗತಿಯಲ್ಲಿ ಅಚ್ಚರಿ ಮೂಡಿಸುವಂತಹ ಸಾಧನೆಯನ್ನು ಮಾಡಿದ್ದಾರೆ. ಹೌದು, ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಚಂಡರಕಿ ಗ್ರಾಮದ ಹುಡುಗಿ. ಆಕೆಯ ತಾಯಿ ನರಸಮ್ಮ ಹಾಗೂ ತಂದೆ ನರಸಿಂಹ. ಸಣ್ಣ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಸೋನು ಅಪ್ಪನೊಂದಿಗೆ ಹೊಟ್ಟೆಪಾಡಿಗಾಗಿ ದುಡಿಯಲು ಬೆಂಗಳೂರಿಗೆ ಬರುತ್ತಾಳೆ. ತಂದೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಆಗ ಸೋನು ಬೆಂಗಳೂರು ಸಹಕಾರ ನಗರದಲ್ಲಿರುವ ಗುಂಡಾಂಜನೇಯ ದೇವಾಲಯದಲ್ಲಿ ಭಿಕ್ಷೆ ಬೇಡುತ್ತಾಳೆ! ನಂತರ ಅನಾರೋಗ್ಯಕ್ಕೆ ಒಳಗಾದ ತಂದೆ ತಾನು ಕೂಡ ಭಿಕ್ಷೆ ಬೇಡುವುದಕ್ಕೇ ಆರಂಭಿಸುತ್ತಾರೆ. ಇನ್ನೇನು ತಂದೆ ನನ್ನನ್ನು ಕೂಲಿ ಕೆಲಸಕ್ಕೆ ಅಥವಾ ಭಿಕ್ಷೆ ಬೇಡುವುದಕ್ಕೆ ಕಳುಹಿಸುತ್ತಾರೆ ಎಂದು ಸೋನು ಕಂಗಾಲಾಗುತ್ತಾಳೆ. ಇಂತಹ ಸಮಯದಲ್ಲಿ ಸೋನುವಿನ ಕೈಹಿಡಿದು ಈ ಮಟ್ಟಕ್ಕೆ ಬೆಳೆಸಿದ್ದು ಸ್ಪರ್ಶ ಟ್ರಸ್ಟ್.

ಅನಾಥ ಮಕ್ಕಳ ನೋವಿಗೆ ಸ್ಪಂದಿಸುವ ಸ್ಪರ್ಶ ಟ್ರಸ್ಟ್ ಸೋನು ವಿಷಯದಲ್ಲಿ ದಾರಿದೀಪವಾಗಿದೆ. ದೇವಸ್ಥಾನದ ಎದುರು ಭಿಕ್ಷೆ ಬೇಡುತ್ತಿದ್ದ ಅವಳನ್ನು 2013ರಲ್ಲಿ ಸ್ಪರ್ಶ ಟ್ರಸ್ಟ್ ಸಿಬ್ಬಂದಿ ರೂಪ ಮಹಾಜನ ಕರೆದುಕೊಂಡು ಹೋಗಿ ಒಂದು ನೆಲೆ ಒದಗಿಸುತ್ತಾರೆ. ಸೋನು ಓದಿನಲ್ಲಿ ಬಹಳ ಆಸಕ್ತಿ ಹೊಂದಿರುವುದನ್ನು ಕಂಡು ಆಕೆಯ ಗುರಿ ಮುಟ್ಟುವಲ್ಲಿ ಕೈಜೋಡಿಸುತ್ತಾರೆ. ಹೌದು ಇಂದು ಅನಾಥ ಹುಡುಗಿಯೊಬ್ಬಳು ಇಂತಹ ಸಾಧನೆಯನ್ನು ಮಾಡಿದ್ದಾಳೆ ಎಂದರೆ ಅದಕ್ಕೆ ಸ್ಪರ್ಶ ಟ್ರಸ್ಟ್ ಕೂಡ ಕಾರಣ. ಓದುವ ಹಂಬಲವಿದ್ದ ಸೋನುವನ್ನು ಬೆಂಗಳೂರಿನ ಸಂಜೀವಿನಿ ನಗರದ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ರಿಂದ 7ನೇ ತರಗತಿಯವರಿಗೆ ಅಧ್ಯಯನ ಮಾಡಿಸುತ್ತಾರೆ. ಆದರೆ ಸೋನು ಓದಿನಲ್ಲಿ ಅತಿಮುಂದು. ಹಾಗಾಗಿ ಆಕೆಯನ್ನು 8ರಿಂದ 10ನೇ ತರಗತಿಯವರೆಗೂ ಆಂಗ್ಲಮಾಧ್ಯಮದಲ್ಲಿ ಓದಿಸುತ್ತಾರೆ.

ಹೆಸರುಘಟ್ಟದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಸೋನು ಇಂದು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕವನ್ನು ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ’ಬೆಂಗಳೂರಿಗೆ ಬಂದು ಮೊದಲು ತಾನು ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದೆ. ಇದೇ ನನ್ನ ಜೀವನ ಆಗಿಬಿಡುತ್ತೇನೋ ಎಂದು ಹೆದರಿದ್ದೆ ಅಷ್ಟರಲ್ಲಿ ಸ್ಪರ್ಶ ಟ್ರಸ್ಟ್ ನನ್ನನ್ನು ಅವರ ಕಚೇರಿಗೆ ಕರೆದುಕೊಂಡು ಹೋಗಿ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ನಾನೊಬ್ಬ ಅನಾಥೆ. ಆದರೆ ಇಂಜಿನಿಯರ್ ಆಗಬೇಕೆಂಬ ಕನಸು ನನ್ನದಾಗಿದೆ’ ಎಂದು ಸಾಧಕಿ ಸೋನು ಹೇಳಿದ್ದಾರೆ.

ಇನ್ನು ಸ್ಪರ್ಶ ಟ್ರಸ್ಟ್ ನ ಸಂಸ್ಥಾಪಕ ಗೋಪಿನಾಥ್ ಅವರು ಸೋನು ಪುಟ್ಟ ಬಾಲಕಿ ಆಗಿರುವಾಗ ಸಿಬ್ಬಂದಿ ದೇವಸ್ಥಾನದಲ್ಲಿ ಭಿಕ್ಷೆ ಬೇಡುವುದನ್ನು ನೋಡಿ ಆಕೆಯನ್ನು ರಕ್ಷಣೆ ಮಾಡಿ ಇಲ್ಲಿಗೆ ಕರೆದುಕೊಂಡು ಬಂದರು. ನಂತರ ಅವಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಲಾಗಿದೆ. ಇಂದು ಅವಳ ಸಾಧನೆ ನಮಗೆ ಖುಷಿ ತಂದಿದೆ. ಓದಿನಲ್ಲಿ ಮುಂದೆ ಇರುವ ಸೋನುವಿಗೆ ಹೆತ್ತವರು ಇಲ್ಲದ ನೋವು ಕಾಡದಂತೆ ಆಕೆಯ ಸಾಧನೆಗೆ ನಾವೆಲ್ಲರೂ ಜೊತೆಯಾಗಿದ್ದೇವೆ ಎಂದು ಹೇಳಿದ್ದಾರೆ. ಒಬ್ಬಳು ತಂದೆ ತಾಯಿ ಇಲ್ಲದ ಅನಾಥ ಮಗು ತನ್ನ ಗುರಿಯನ್ನು, ತನ್ನ ಕನಸನ್ನು ಮುಂದೆ ಇಟ್ಟುಕೊಂಡು ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ ಎಂದರೆ ಇದು ನಿಜಕ್ಕೂ ಇತರರಿಗೆ ಪ್ರೇರಣೆಯು ಹೌದು ಮಾದರಿಯೂ ಹೌದು.

Leave a Comment