ಮನೆಯಲ್ಲಿಯೇ ಸುಲಭವಾಗಿ ಹುರಿಗಡಲೆ ಹೇಗೆ ಮಾಡುವುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕಡಲೆಯಿಂದ ನಾವು ಸುಲಭವಾಗಿ ಹುರಿಗಡಲೆ ಮಾಡಿಕೊಳ್ಳಬಹುದು. ಇದು ಸಂಜೆಯ ಸಮಯದಲ್ಲಿ ಟೀ ಕಾಫಿ ಜೊತೆಗೆ ಸೇವಿಸಲು ಬಹಳ ಚೆನ್ನಾಗಿ ಇರುವುದು ಮಾತ್ರವಲ್ಲದೆ ಎಲ್ಲಿಯಾದರೂ ಹೊರಗಡೆ ಹೋಗುವಾಗ ಕೂಡಾ ತೆಗೆದುಕೊಂಡು ಹೋಗಬಹುದು. ಇದನ್ನು ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು? ಹಾಗೂ ಮಾಡುವುದು ಹೇಗೆ? ಎನ್ನುವುದನ್ನು ನೋಡೋಣ.
ಹುರಿಗಡಲೆ ಮಾಡಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಎರಡೇ ಪದಾರ್ಥಗಳು. ಕೇವಲ ಈ ಎರಡು ಪದಾರ್ಥಗಳನ್ನು ಬಳಸಿಕೊಂಡು ನಾವು ಹುರಿಗಡಲೆ ಮಾಡಿಕೊಳ್ಳಬಹುದು. ಅರ್ಧ ಕಪ್ ಅಷ್ಟು ಕಡಲೆ ಮತ್ತು ಉಪ್ಪು ಇದಕ್ಕೆ ಬೇಕಿರುವ ಪದಾರ್ಥಗಳು. ಇಲ್ಲಿ ಬಳಕೆ ಮಾಡಿದ ಉಪ್ಪನ್ನು ನಂತರ ಬೇರೆ ಯಾವುದೇ ಆಹಾರಕ್ಕೂ ಬಳಕೆ ಮಾಡಿಕೊಳ್ಳಲೂ ಬಹುದು. ಇನ್ನು ಇದನ್ನು ಮಾಡುವುದು ಹೇಗೆ? ಅಂತಾ ನೋಡುವುದಾದರೆ , ಮೊದಲು ಸ್ಟೋವ್ ಮೇಲೆ ಒಂದು ಬಾಣಲೆ ಇಟ್ಟುಕೊಂಡು ಅದು ಸ್ವಲ್ಪ ಬಿಸಿ ಆದ ನಂತರ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಉಪ್ಪು ಸಹ ಬಿಸಿ ಆಗುವವರೆಗೂ ಕಾಯಬೇಕು.
ನಂತರ ಸ್ವಲ್ಪ ಸ್ವಲ್ಪ ಕಡಲೆಯನ್ನು ಹಾಕಿಕೊಂಡು ಉಪ್ಪಿನಲ್ಲಿ ಚೆನ್ನಾಗಿ ಕೈ ಬಿಡದೇ ಹುರಿದುಕೊಳ್ಳಬೇಕು. ಒಮ್ಮೆಗೇ ಎಲ್ಲವನ್ನೂ ಹಾಕಿಕೊಳ್ಳಬಾರದು. ಸ್ವಲ್ಪ ಉಪ್ಪಿನ ಅಂಶ ಕಡಲೆಗೆ ಹೀರಿಕೊಳ್ಳುವ ಹಾಗೆ ಹುರಿದುಕೊಳ್ಳಬೇಕು. ನಂತರ ಕಡಲೆಯ ಸಿಪ್ಪೆ ಬಿಟ್ಟುಕೊಳ್ಳುವ ಸಮಯದಲ್ಲಿ ಕಡಲೆಯನ್ನು ತೆಗೆದು ಬೇರೆ ತಟ್ಟೆಗೆ ಹಾಕಿಟ್ಟುಕೊಳ್ಳಬೇಕು. ಇದೇ ರೀತಿ ಉಳಿದ ಎಲ್ಲಾ ಕಡಲೆಯನ್ನು ಉಪ್ಪಿನಲ್ಲಿ ಹುರಿದು ಇಟ್ಟುಕೊಳ್ಳಬೇಕು. ಈ ರೀತಿ ಮಾಡಿ ಎಷ್ಟು ದಿನ ಬೇಕಿದ್ದರೂ ಶೇಖರಿಸಿ ಇಟ್ಟುಕೊಳ್ಳಬಹುದು. ಈ ರೀತಿ ಮಾಡಿಕೊಟ್ಟರೆ ಮಕ್ಕಳಿಗೂ ಇಷ್ಟ ಆಗಬಹುದು.
ಇನ್ನು ಕಡಲೆ ಬಗ್ಗೆ ಮತ್ತು ಅದರ ಆರೋಗ್ಯಕರ ಅಂಶಗಳ ಬಗ್ಗೆ ನಮಗೆ ತಿಳಿದೇ ಇರುವುದರಿಂದ ಆಗಾಗ ಇದರ ಸೇವನೆ ಬಹಳವೇ ಒಳ್ಳೆಯದು. ಹಾಗಾಗಿ ಪ್ರತೀ ದಿನ ಅಲ್ಲದೆ ಇದ್ದರೂ ಆಗಾಗ ಕಡಲೆ ಸೇವಿಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಸಹ ತುಂಬಾ ಒಳ್ಳೆಯದು.