ಸಾಮಾನ್ಯವಾಗಿ ಎಲ್ಲ ಚಿತ್ರರಂಗದ, ಎಲ್ಲಾ ಸ್ಟಾರ್ ನಟರಿಗೂ ಅಭಿಮಾನಿಗಳ ದಂಡೇ ಇರುತ್ತೆ. ಎಲ್ಲರೂ ತಮ್ಮ ನೆಚ್ಚಿನ ನಟರು ಅಂಥ ಪಾತ್ರವನ್ನ ಮಾಡಬೇಕು ಇಂಥ ಸಿನಿಮಾದಲ್ಲಿ ನಟಿಸಬೇಕು ಅಂತ ಕನಸು ಕಾಣ್ತಾರೆ. ಸದ್ಯ ಎಲ್ಲರ ನೆಚ್ಚಿನ ಸ್ಟಾರ್ ಎನಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಸಾಕಷ್ಟು ಜನರಿಗೆ, ಯಶ್ ಅವರ ನಟನೆಯ ಕೆ ಜಿ ಎಫ್ ಚಾಪ್ಟರ್ 3 ಬರಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಇನ್ನೂ ಹಲವರಿಗೆ ಯಶ್ ಅವರನ್ನ ಕೆ ಜಿ ಎಫ್ ನಿಂದ ಆಚೆ ನೋಡುವ ಆಸೆ. ಅಂದರೆ ಬೇರೆ ಬೇರೆ ಪಾತ್ರಗಳಲ್ಲಿ ಯಶ್ ಅವರನ್ನ ನೋಡಲು ಬಯಸುತ್ತಿದ್ದಾರೆ. ಹಾಗಾಗಿ ನಟ ಯಶ್ ಬಳಿ ತಮಗಿಷ್ಟವಾದ ಪಾತ್ರಗಳಲ್ಲಿ ನಟಿಸುವಂತೆ ಮನವಿ ಮಾಡುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಇಂದು ವಿಶ್ವಾದ್ಯಂತ ಗುರುತಿಸಿಕೊಂಡ ನಟ. ದೇಶದ ಮೂಲೆ ಮೂಲೆಯಲ್ಲೂ ಅವರ ಅಭಿಮಾನಿಗಳು ಇದ್ದಾರೆ. ಸಮಾಜಿಕ ಜಾಲತಾಣದಲ್ಲಿ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಮಹಾರಾಷ್ಟ್ರದಲ್ಲಿಯೂ ಯಶ್ ಅಭಿಮಾನಿಗಳಿಗೇನು ಕೊರತೆಯಿಲ್ಲ. ಅಲ್ಲಿನ ಅಭಿಮಾನಿಗಳೂ ಕೂಡ ನಟ ಯಶ್ ಅವರ ಮುಂದಿನ ಚಿತ್ರ ಹೀಗಿರಲಿ ಅಂತ ಅದರ ಬ್ಲೂ ಪ್ರಿಂಟ್ ರೆಡಿ ಮಾಡಿಬಿಟ್ಟಿದ್ದಾರೆ.
ಮಹಾರಾಷ್ಟ್ರದ ವೀರ, ಮಹಾರಾಜ, ಮರಾಠರ ಆರಾಧ್ಯ ದೈವ ಛತ್ರಪತಿ ಶಿವಾಜಿ. ಶಿವಾಜಿ ಮಹಾರಾಜರ ಜಯೋಪಿಕ್ ನಲ್ಲಿ ಯಶ್ ಅಭಿನಯಿಸಲಿ ಎನ್ನುವುದು ಅಲ್ಲಿನ ಜನರ ಮಹತ್ವಕಾಂಕ್ಷೆ. ಈಗಾಗಲೇ ಯಶ್ ಅವರ ಛತ್ರಪತಿ ಶಿವಾಜಿ ದಿರಿಸಿನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ ಮರಾಠಾ ಅಭಿಮಾನಿಗಳು. ಇನ್ನು ಈ ಚಿತ್ರಕ್ಕೆ, ಚಿತ್ರ ಬ್ರಹ್ಮ ಎನಿಸಿರುವ ರಾಜಮೌಳಿ ನಿರ್ದೇಶನ ಇರಬೇಕು ಎಂದೂ ಬಯಸಿದ್ದಾರೆ.
ಇನ್ನು ಕನ್ನಡ ಅಭಿಮಾನಿಗಳದ್ದು ಬೇರೆಯದೇ ಬೇಡಿಕೆ. ಕೆಲವರು ಇಮ್ಮಡಿ ಪುಲಕೇಶಿಯಾಗಿ ಯಶ್ ಕಾಣಿಸಿಕೊಳ್ಳಬೇಕು ಎಂದಿದ್ದಾರೆ. ಇನ್ನೂ ಕೆಲವು ಯಶ್ ಅಭಿಮಾನಿಗಳು ಯಶ್ ಅವರ ಶಿವಾಜಿ ಪಾತ್ರದ ಫೋಟೋವನ್ನು ನೋಡಿ ಗರಂ ಆಗಿದ್ದಾರೆ. ನಮ್ಮ ನಟ ಯಶ್ ಯಾವುದೇ ಭಾಷೆಯ ಸಿನಿಮಾವನ್ನು ಬೇಕಾದರೂ ಮಾಡಲಿ ಆದರೆ, ಅದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ನಟ ಯಶ್ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸುತ್ತಾರಾ! ಇಂಥ ಪಾತ್ರಗಳನ್ನು ಮಾಡಿಸಲು ಯಾವುದಾದರೂ ನಿರ್ದೇಶಕರು ಸಿದ್ಧರಾಗುತ್ತಿದ್ದಾರಾ ಕಾದು ನೋಡಬೇಕು.